ಮಸ್ತಾಬ ಗೋರಿ - 
	ಪ್ರಾಚೀನ ಇತಿಹಾಸ ಕಾಲದಲ್ಲಿ ಈಜಿಪ್ಟಿನ ಶ್ರೀಮಂತವರ್ಗದವರ ಶವಸಂಸ್ಕಾರಕ್ಕೆ ಹಸಿ ಇಟ್ಟಿಗೆಗಳಿಂದ ನಿರ್ಮಿಸುತ್ತಿದ್ದ ಗೋರಿ. ಮಸ್ತಾಬಸ್ ಎಂಬ ಪದಕ್ಕೆ ಅರಾಬಿಕ್ ಭಾಷೆಯಲ್ಲಿ ಕಾಲುಮಣೆ, ಮೇಜು ಎಂದರ್ಥ. ಭೂಮಿ ಯೊಳಗಣ ಆಯಾಕಾರದ ಗುಳಿಯ ಪಾಶ್ರ್ವಗಳನ್ನು ಹಸಿ ಇಟ್ಟಗೆ, ಕಲ್ಲು ಮರದ ಹಲಗೆ ಅಥವಾ ಕಲ್ಲುಚಪ್ಪಡಿಗಳಿಂದ ಭದ್ರಪಡಿಸಿ, ಅದರೊಳಗೆ ಶವವನ್ನು ಹುಗಿದಿಡುತ್ತಿದ್ದರು. ಭೂಮಟ್ಟದಿಂದ ಮೇಲೆ ನಿಂತಿರುತ್ತಿದ್ದ ಆ ಕಟ್ಟಡದ ಮೇಲೆ ಹಾಸುಗಲ್ಲನ್ನು ಚಾವಣಿಯಂತೆ ಇಡಲಾಗುತ್ತಿತ್ತು. ಅಂಥ ಕಟ್ಟಡವನ್ನು ಮಸ್ತಾಬ ಎಂದು ಕರೆಯಲಾಯಿತು. ಅತ್ಯುತ್ತಮವಾದ ಕೆಲವು ಮಸ್ತಾಬ ಗೋರಿಗಳನ್ನು ಸಂಶೋಧಿಸಿದವರು ವಾಲ್ಟರ್ ವ ಮೆರಿ. 1937ರಲ್ಲಿ ಶೋಧಿಸಿದ ಒಂದು ಮಸ್ತಾಬದ ವಿಸ್ತಾರ 42.36 ಮೀಟರ್ ಉದ್ದ ಮತ್ತು 15.54 ಮೀಟರ್ ಅಗಲ. ಇದರ ತಳದಲ್ಲಿ ಭೂಮಿಯೊಳಗೆ ಐದು ಕೋಣೆಗಳಿವೆ. ಗೋಡೆಗಳಿಗೆ ಚಿತ್ರತ ಚಾಪೆಗಳನ್ನು ನೇತುಹಾಕಿದೆ. ಆಗಿನಕಾಲದಲ್ಲಿ ಗೋರಿಗಳನ್ನು ಜೀವಂತ ಜನರ ವಾಸಗೃಹಗಳ ಮಾದರಿಯಲ್ಲಿ ನಿರ್ಮಿಸಲಾಗಿತ್ತಿತ್ತು ಎಂದು ಇದರ ಅರ್ಥ. ಒಳಗಣ ಕೋಣೆಯನ್ನು ಇಬ್ಭಾಗಮಾಡಿ ಒಂದು ಭಾಗವನ್ನು `ಕಾ ಅಥವಾ ಆತ್ಮನ ವಾಸಸ್ಥಳವೆಂದು ಭಾವಿಸಿ ಅಲ್ಲಿ ಆಗಾಗ್ಗೆ ಆಹುತಿಗಳನ್ನು ನೀಡುತ್ತಿದ್ದರು. ಮತ್ತೊಂದು ರಹಸ್ಯಕೋಣೆ ಅಥವಾ ಸೆರ್ಡಾಬಾನಲ್ಲಿ ಮೃತನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿದ್ದರು. ಮೃತನದೇಹ ಯಾವುದೇ ಕಾರಣದಿಂದ ನಾಶವಾದರೆ ಪ್ರೇತಲೋಕದಲ್ಲಿ ಸೆರ್ಡಾಬ್ ಪ್ರತಿಮೆ ಅವನನ್ನು ಪ್ರತಿನಿಧಿಸುತ್ತದೆಂಬ ನಂಬಿಕೆಯಿತ್ತು. ಕಾಲಾನುಕ್ರಮದಲ್ಲಿ ಈ ಪ್ರೇತ ಕೋಣೆಯಲ್ಲಿ ಅನೇಕ ವಿಭಾಗಗಳುಂಟಾದುವು. ಅವುಗಳ ಗೋಡೆಗಳ ಮೇಲೆ ಮೃತನ ಜೀವನಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಈಜಿಪ್ಟಿನ ಮೊದಲ ರಾಜವಂಶ ಕಾಲದಲ್ಲಿ (ಕ್ರಿ.ಪೂ. 3200-2980) ಬಳಕೆಯಲ್ಲಿದ್ದ ಮಸ್ತಾಬ ಗೋರಿಗಳೇ ಮುಂದಿನ ಪಿರಮಿಡ್ಡುಗಳ ಉಗಮಕ್ಕೆ ಕಾರಣವೆನ್ನಲಾಗಿದೆ.                        			
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ